ಕಿಲಿಮಾಂಜಾರೋ ಪ್ರದೇಶ

ಟಾಂಗನ್ಯೀಕದ ಒಂದು ಆಡಳಿತ ವಿಭಾಗ. 1963ರಲ್ಲಿ ಆ ದೇಶ ಕೈಕೊಂಡ ಪುನರ್ವಿಂಗಡಣೆಯ ಫಲವಾಗಿ ಅಸ್ತಿತ್ವಕ್ಕೆ ಬಂತು. ಕಿಲಿಮಾಂಜಾರೋ ಜಿಲ್ಲೆ, ಪಾರೆ ಜಿಲ್ಲೆ ಇವನ್ನು ಸೇರಿಸಿ ಈ ಪ್ರದೇಶವನ್ನು ರಚಿಸಲಾಯಿತು. 5,000 ಚ.ಮೈ. ವಿಸ್ತಾರವಾಗಿರುವ ಈ ಪ್ರದೇಶದ ಜನಸಂಖ್ಯೆ 4,73,859 (1957).

ಉತ್ತರ ಪೂರ್ವಗಳಲ್ಲಿ ಕೀನ್ಯ, ಆಗ್ನೇಯ ದಕ್ಷಿಣಗಳಲ್ಲಿ ಟಾಂಗ ಪ್ರದೇಶ, ಪಶ್ಚಿಮದಲ್ಲಿ ಉತ್ತರ ಪ್ರದೇಶ--ಇವು ಇದರ ಮೇರೆಗಳು. ಕಿಲಿಮಾಂಜಾರೋಪರ್ವತ ಶ್ರೇಣಿಯಿಂದ ಆಗ್ನೇಯಾಭಿಮುಖವಾಗಿ ಪಾರೆ ಪರ್ವತಗಳು ಹಬ್ಬಿವೆ. ಕಿಲಿಮಾಂಜಾರೋದಲ್ಲಿ ಹುಟ್ಟುವ ಹೊಳೆಗಳು ಉತ್ತರಾಭಿಮುಖವಾಗಿ ಹರಿದು ಆಂಬೊಸೆಲಿ ಸರೋವರವನ್ನೋ ಕೀನ್ಯದಲ್ಲಿರುವ ಟ್ಸಾವೋ ನದಿಯನ್ನೋ ಸೇರುತ್ತವೆ. ಈ ಪ್ರದೇಶದಲ್ಲಿ ಹೆಚ್ಚಾಗಿ ಮಳೆಯಾಗುವುದು ಮಾರ್ಚ್-ಮೇ ತಿಂಗಳುಗಳಲ್ಲಿ. ಎತ್ತರಕ್ಕೆ ಅನುಗುಣವಾಗಿ ಉಷ್ಣತೆ ವ್ಯತ್ಯಾಸವಾಗುತ್ತದೆ. ಪರ್ವತದ ಬದಿಗಳಲ್ಲಿರುವ ಜ್ವಾಲಾಮುಖಿನಿರ್ಮಿತ ನೆಲ ಅತ್ಯಂತ ಫಲವತ್ತಾದ್ದು. ಪರ್ವತದ ತಪ್ಪಲುಗಳು ಕೆಂಪುಮಣ್ಣಿನಿಂದ ಕೂಡಿವೆ. ವೃಕ್ಷರಾಜಿತ ಸವಾನದಿಂದ ಹಿಡಿದು ಪರ್ವತಕಾಡುಗಳ ಮತ್ತು ಆಫ್ರೊ-ಆಲ್ಪೈನ್ ಸಸ್ಯಗಳ ವರೆಗೆ ನಾನಾ ಬಗೆಯ ಸಸ್ಯಗಳುಂಟು.

ಕಿಲಿಮಾಂಜಾರೋ ಪ್ರದೇಶದಲ್ಲಿ ವಾಸಿಸುವ ಜನರ ಪಂಗಡಗಳಲ್ಲಿ ಚಗ್ಗಾ ಎಂಬುದು ಅತಿ ದೊಡ್ಡದು : ಜನಸಂಖ್ಯೆ 3,14,800 (1957). ಇವರು ಕಿಲಿಮಾಂಜಾರೋ ಪರ್ವತದ ಇಳಿಜಾರುಗಳಲ್ಲಿ ವಾಸಿಸುತ್ತಾರೆ. ಪಾರೆಗಳು ವಾಸಿಸುವುದು ಪಾರೆ ಜಿಲ್ಲೆಯಲ್ಲಿ. ಇವರ ಸಂಖ್ಯೆ 1,13,900. ಮೂರನೆಯ ಪ್ರಮುಖ ಪಂಗಡವೆಂದರೆ ಮ್ಬುಗು (11,800). ಕಿಲಿಮಾಂಜಾರೋದ ಇಳಿಜಾರುಗಳಲ್ಲಿ ಕೆಲವು ಐರೋಪ್ಯರೂ ವಾಸಿಸುತ್ತಾರೆ.

ಕಾಫಿ ಇಲ್ಲಿಯ ಮುಖ್ಯ ಬೆಳೆ. ನೀರಾವರಿ ಬೆಳೆಯಾದ ಕಬ್ಬಿನಿಂದ ಸಕ್ಕರೆ ತೆಗೆಯುವ ಒಂದು ಕಾರ್ಖಾನೆ ಅರುಷ ಚಿನಿ ಎಂಬಲ್ಲಿ ಇದೆ. ಕತ್ತಾಳೆ ನಾರು, ಮುಸುಕಿನ ಜೋಳ, ಬಾಳೆ, ಗೆಣಸು ಮತ್ತು ತಿಂಗಳ ಹುರುಳಿ ಇತರ ಬೆಳೆಗಳು. ಮೋಷಿ ಈ ಪ್ರದೇಶದ ಆಡಳಿತಕೇಂದ್ರ. ಇದರ ಜನಸಂಖ್ಯೆ 13,726 (1957). ಕಿಲಿಮಾಂಜಾರೋದ ದಕ್ಷಿಣದ ಬದಿಯಲ್ಲಿ ಈ ಪಟ್ಟಣವಿದೆ. ಇಲ್ಲಿಗೂ ಟಾಂಗಕ್ಕೂ ರೈಲ್ವೆ ಸಂಪರ್ಕವುಂಟು. ಕೀನ್ಯ ರೈಲ್ವೆಯೊಂದಿಗೂ ಸಂಬಂಧ ಏರ್ಪಟ್ಟಿದೆ.

(ಬಿ.ಎನ್.ಎ.ಜಿ.)

ವರ್ಗ:ಮೈಸೂರು ವಿಶ್ವವಿದ್ಯಾನಿಲಯ ವಿಶ್ವಕೋಶ